ಬೆಳೆ ವಿಮೆಯಲ್ಲಿ ತೀರ್ಥಹಳ್ಳಿ ರೈತರಿಗೆ ಅನ್ಯಾಯ ಆರೋಪ: ಕುಪ್ಪಳ್ಳಿ ಪ್ರಶಾಂತ್ ಅಸಮಾಧಾನ
ತೀರ್ಥಹಳ್ಳಿ: ಬೆಳೆ ವಿಮೆ ಪಾವತಿಯಲ್ಲಿ ತೀರ್ಥಹಳ್ಳಿ ತಾಲೂಕಿನ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಶೇಡ್ಗರು, ಕಟ್ಟೆಹಕ್ಲು, ಹೆದ್ದೂರು ಸೇರಿದಂತೆ ತಾಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಅತ್ಯಂತ ಕಡಿಮೆ ಪ್ರಮಾಣದ ವಿಮಾ ಹಣ ಪಾವತಿಸಲಾಗುತ್ತಿದೆ ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕುಪ್ಪಳ್ಳಿ ಪ್ರಶಾಂತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಬೆಳೆ ವಿಮೆ ಪಾವತಿಯಲ್ಲಿ ಮಳೆ ಮಾಪನದ ಲೆಕ್ಕಾಚಾರವನ್ನು ಆಧಾರವಾಗಿಟ್ಟುಕೊಂಡು ಪರಿಹಾರ ನೀಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉತ್ತರಿಸಿದ್ದಾರೆ. ಆದರೆ, ಸರಿಯಾದ ಮಳೆ ಮಾಪನದ ನಿಖರತೆಯನ್ನು ಪರಿಶೀಲಿಸದೆ ವಿಮಾ ಹಣ ನಿಗದಿಪಡಿಸಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಎಂಬುದು ರೈತರ ಅಳಲಾಗಿದೆ.
ವಿಮಾ ಕಂಪನಿಯು ತೀರ್ಥಹಳ್ಳಿ ತಾಲೂಕಿಗೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪದ ಜೊತೆಗೆ, ಈ ವಿಚಾರದಲ್ಲಿ ತೋಟಗಾರಿಕೆ ಇಲಾಖೆ ಮಧ್ಯಸ್ಥಿಕೆ ವಹಿಸುತ್ತಿದ್ದರೂ ರೈತರ ಸಮಸ್ಯೆಗೆ ಸಮರ್ಪಕ ಪರಿಹಾರ ಸಿಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.“ಸಮೀಕ್ಷೆ ಮಾಡಿಲ್ಲ, ಮಳೆ ಮಾಪನ ಸರಿಯಾಗಿಲ್ಲ. ಇದೆಲ್ಲವೂ ರೈತರಿಗೆ ಮೋಸ ಮಾಡುವ ಹುನ್ನಾರ ಎಂಬ ಅನುಮಾನ ಮೂಡುತ್ತಿದೆ. ಈ ವಿಚಾರದಲ್ಲಿ ತೋಟಗಾರಿಕೆ ಇಲಾಖೆ ಮಧ್ಯಸ್ಥಿಕೆ ವಹಿಸುತ್ತಿದೆ. ಆದರೆ,ಈಗಾಗಲೇ ತೋಟಗಾರಿಕೆ ಇಲಾಖೆ ಮುಂದೆ ಪ್ರತಿಭಟನೆ ನೀಡಿದ್ದರೂ ಯಾವುದೇ ಪರಿಹಾರ ದೊರೆತಿಲ್ಲ ಜೊತೆಗೆ ಯಾರನ್ನು ನಂಬಬೇಕು ಎಂಬುದೇ ಯಕ್ಷಪ್ರಶ್ನೆಯಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಸಮಗ್ರ ವರದಿ ಪಡೆದು, ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು” ಎಂದು ಕುಪ್ಪಳ್ಳಿ ಪ್ರಶಾಂತ್ ಮನವಿ ಮಾಡಿದ್ದಾರೆ.
What do you feel about this post?
Like
Love
Happy
Haha
Sad
Angry
