ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಹಬ್ಬದ ದಿನವೂ ರಜೆ ಇಲ್ಲವೇ?

ತೀರ್ಥಹಳ್ಳಿ : ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಹಬ್ಬದ ದಿನಗಳಲ್ಲಿಯೂ ರಜೆ ನೀಡದೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿರುವ ಸರ್ಕಾರದ ಕ್ರಮಕ್ಕೆ ಮಂಜುನಾಥ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಅಂಗನವಾಡಿಗಳನ್ನು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮುಚ್ಚುವಂತಿಲ್ಲ. ಈ ಅವಧಿಯಲ್ಲಿ ಪೋಷಣ್ ಟ್ರ್ಯಾಕರ್‌ನಲ್ಲಿ ಅಗತ್ಯ ಮಾಹಿತಿಗಳನ್ನು ಅಪ್‌ಡೇಟ್ ಮಾಡಬೇಕು. ಕಾರ್ಯಕರ್ತೆ ಹಾಗೂ ಸಹಾಯಕಿಯರು ಮೇಲ್ವಿಚಾರಕರ ಗಮನಕ್ಕೆ ತಂದು, ಒಬ್ಬರು ರಜೆ ಪಡೆದು ಮತ್ತೊಬ್ಬರು ಕರ್ತವ್ಯ ನಿರ್ವಹಿಸುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಂಗನವಾಡಿಗಳನ್ನು ಮುಚ್ಚಲು ಅವಕಾಶವಿಲ್ಲ ಎಂದು ಸೂಚಿಸಲಾಗಿದೆ. ಮೇಲ್ವಿಚಾರಕಿಯರು ಹಾಗೂ ಸಿ ಡಿ ಪಿ ಓ ಖುದ್ದಾಗಿ ಅಂಗನವಾಡಿಗಳಿಗೆ ಭೇಟಿ ನೀಡಲಿದ್ದೇವೆ ಎಂಬ ಸೂಚನೆ ನೀಡಲಾಗಿದೆ.ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೂ ಕುಟುಂಬವಿದೆ. ಅವರಿಗೂ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸುವ ಆಸೆ ಇರುತ್ತದೆ. ಹೀಗಿರುವಾಗ ಹಬ್ಬದ ದಿನಗಳಲ್ಲಿಯೂ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರುವುದು ಸರಿಯಲ್ಲ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಹಬ್ಬದ ದಿನ ರಜೆ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಮಂಜುನಾಥ್ ಶೆಟ್ಟಿ ಮನವಿ ಮಾಡಿದ್ದಾರೆ.

ಪರಿಸರ ರಕ್ಷಕರೇ ಭಕ್ಷಕರಾದರೇ?: ಕುಶಾಲನಗರ ಅಂಚೆ ಕಚೇರಿಯಲ್ಲಿ ೭ ಬೃಹತ್ ಮರಗಳ ಮಾರಣಹೋಮ

ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣದ ಸರ್ಕಾರಿ ಅಂಚೆ ಕಚೇರಿ ಆವರಣದಲ್ಲಿ ಅರಣ್ಯ ಇಲಾಖೆಯ ಅನುಮತಿ ಮೀರಿ ಏಳು ಬೃಹತ್ ಮರಗಳನ್ನು ಕಡಿದಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಂಚೆ ಇಲಾಖೆಯ ಮನವಿಯ ಮೇರೆಗೆ ಅರಣ್ಯ ಇಲಾಖೆಯು ಕೇವಲ ಎರಡು ಮರಗಳನ್ನು ಕಡಿಯಲು ಅನುಮತಿ ನೀಡಿ, 2025ರ ಏಪ್ರಿಲ್‌ನಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿತ್ತು ಎನ್ನಲಾಗಿದೆ. ಆದರೆ ಅನುಮತಿ ನೀಡಿದ ಎರಡು ಮರಗಳ ಬದಲಾಗಿ ಒಟ್ಟು ಏಳು ಮರಗಳನ್ನು ಕಡಿದಿರುವ ಆರೋಪ ಕೇಳಿಬಂದಿದ್ದು, ಈಗಾಗಲೇ ಮೂರು ಕ್ಯಾಂಟರ್ ಲಾರಿಗಳಲ್ಲಿ ಮರದ ತುಂಡುಗಳನ್ನು ಸಾಗಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿ ಮಧು ಕುಮಾರ್ ಅವರನ್ನು ಕರವೇ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಪ್ರಶ್ನಿಸಿದಾಗ, ಕೇವಲ ಎರಡು ಮರಗಳನ್ನು ಕಡಿಯಲು ಮಾತ್ರ ಅನುಮತಿ ನೀಡಿದ್ದು, ಉಳಿದ ಮರಗಳ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಂಘಟನೆಯ ಮುಖಂಡರು, ಅರಣ್ಯ ಇಲಾಖೆಯ ಸಿಬ್ಬಂದಿ ಮೇಲ್ವಿಚಾರಣೆ ಇಲ್ಲದೆ ಇಷ್ಟೊಂದು ಮರಗಳನ್ನು ಕಡಿದು ಸಾಗಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.ಇದೇ ವೇಳೆ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಅವರನ್ನು ವಿಚಾರಿಸಿದಾಗ, ಮರ ಕಡಿಯುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಅಥವಾ ಆದೇಶದ ಪ್ರತಿ ತಮಗೆ ನೀಡಿಲ್ಲ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅಂಚೆ ಇಲಾಖೆಯ ಹಿರಿಯ ಅಧಿಕಾರಿಯೂ ಅಂಚೆ ಇಲಾಖೆಯ ಗಮನಕ್ಕೆ ತರದೆ ಮರಗಳನ್ನು ಕಡಿದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಕೇವಲ ಎರಡು ಮರಗಳಿಗೆ ಅನುಮತಿ ನೀಡಿ ಉಳಿದ ಐದು ಮರಗಳನ್ನು ಕಡಿದಿರುವ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಿ, ಸಂಬಂಧಪಟ್ಟ ಟೆಂಡರ್‌ದಾರರು ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅಂಚೆ ಕಚೇರಿ ಹಾಗೂ ಅರಣ್ಯ ಇಲಾಖೆ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಸ್ವಾಭಿಮಾನಿ ಸೇನೆ ಎಚ್ಚರಿಕೆ ನೀಡಿದೆ.ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಜಿಲ್ಲಾ ಉಪಾಧ್ಯಕ್ಷರಾದ ರಾಜಶೇಖರ್ ಗೌಡ ಮತ್ತು ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಜಯಶ್ರೀ ಮುರುಗೇಶ್ ಮತ್ತು ಜಿಲ್ಲಾ ಗೌರವಾಧ್ಯಕ್ಷರಾದ ನಂಜಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಮಣಿಕಂಠ ಮತ್ತು ಸಂಘಟನಾ ಕಾರ್ಯದರ್ಶಿ ಖಾಸಿಂ ಮತ್ತು ಕುಶಾಲನಗರ ತಾಲ್ಲೂಕು ಅಧ್ಯಕ್ಷ ಕೆ.ಎಸ್. ಶಿವ ಮತ್ತು ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಭವ್ಯ ಮತ್ತು ತಾಲ್ಲೂಕು ಗೌರವಾಧ್ಯಕ್ಷ ರವೀಂದ್ರ ಮತ್ತು ನಗರ ಘಟಕದ ಗೌರವಾಧ್ಯಕ್ಷ ವಿಲ್ಸನ್ ಮತ್ತು ಮಹಿಳಾ ಘಟಕದ ಉಪಾಧ್ಯಕ್ಷೆ ದಿವ್ಯ ಡಿಸೋಜ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬೆಳೆ ವಿಮೆಯಲ್ಲಿ ತೀರ್ಥಹಳ್ಳಿ ರೈತರಿಗೆ ಅನ್ಯಾಯ ಆರೋಪ: ಕುಪ್ಪಳ್ಳಿ ಪ್ರಶಾಂತ್ ಅಸಮಾಧಾನ

ತೀರ್ಥಹಳ್ಳಿ: ಬೆಳೆ ವಿಮೆ ಪಾವತಿಯಲ್ಲಿ ತೀರ್ಥಹಳ್ಳಿ ತಾಲೂಕಿನ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಶೇಡ್ಗರು, ಕಟ್ಟೆಹಕ್ಲು, ಹೆದ್ದೂರು ಸೇರಿದಂತೆ ತಾಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಅತ್ಯಂತ ಕಡಿಮೆ ಪ್ರಮಾಣದ ವಿಮಾ ಹಣ ಪಾವತಿಸಲಾಗುತ್ತಿದೆ ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕುಪ್ಪಳ್ಳಿ ಪ್ರಶಾಂತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಬೆಳೆ ವಿಮೆ ಪಾವತಿಯಲ್ಲಿ ಮಳೆ ಮಾಪನದ ಲೆಕ್ಕಾಚಾರವನ್ನು ಆಧಾರವಾಗಿಟ್ಟುಕೊಂಡು ಪರಿಹಾರ ನೀಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉತ್ತರಿಸಿದ್ದಾರೆ. ಆದರೆ, ಸರಿಯಾದ ಮಳೆ ಮಾಪನದ ನಿಖರತೆಯನ್ನು ಪರಿಶೀಲಿಸದೆ ವಿಮಾ ಹಣ ನಿಗದಿಪಡಿಸಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಎಂಬುದು ರೈತರ ಅಳಲಾಗಿದೆ.ವಿಮಾ ಕಂಪನಿಯು ತೀರ್ಥಹಳ್ಳಿ ತಾಲೂಕಿಗೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪದ ಜೊತೆಗೆ, ಈ ವಿಚಾರದಲ್ಲಿ ತೋಟಗಾರಿಕೆ ಇಲಾಖೆ ಮಧ್ಯಸ್ಥಿಕೆ ವಹಿಸುತ್ತಿದ್ದರೂ ರೈತರ ಸಮಸ್ಯೆಗೆ ಸಮರ್ಪಕ ಪರಿಹಾರ ಸಿಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.“ಸಮೀಕ್ಷೆ ಮಾಡಿಲ್ಲ, ಮಳೆ ಮಾಪನ ಸರಿಯಾಗಿಲ್ಲ. ಇದೆಲ್ಲವೂ ರೈತರಿಗೆ ಮೋಸ ಮಾಡುವ ಹುನ್ನಾರ ಎಂಬ ಅನುಮಾನ ಮೂಡುತ್ತಿದೆ. ಈ ವಿಚಾರದಲ್ಲಿ ತೋಟಗಾರಿಕೆ ಇಲಾಖೆ ಮಧ್ಯಸ್ಥಿಕೆ ವಹಿಸುತ್ತಿದೆ. ಆದರೆ,ಈಗಾಗಲೇ ತೋಟಗಾರಿಕೆ ಇಲಾಖೆ ಮುಂದೆ ಪ್ರತಿಭಟನೆ ನೀಡಿದ್ದರೂ ಯಾವುದೇ ಪರಿಹಾರ ದೊರೆತಿಲ್ಲ ಜೊತೆಗೆ ಯಾರನ್ನು ನಂಬಬೇಕು ಎಂಬುದೇ ಯಕ್ಷಪ್ರಶ್ನೆಯಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಸಮಗ್ರ ವರದಿ ಪಡೆದು, ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು” ಎಂದು ಕುಪ್ಪಳ್ಳಿ ಪ್ರಶಾಂತ್ ಮನವಿ ಮಾಡಿದ್ದಾರೆ.

Read More ಬೆಳೆ ವಿಮೆಯಲ್ಲಿ ತೀರ್ಥಹಳ್ಳಿ ರೈತರಿಗೆ ಅನ್ಯಾಯ ಆರೋಪ: ಕುಪ್ಪಳ್ಳಿ ಪ್ರಶಾಂತ್ ಅಸಮಾಧಾನ

ತೀರ್ಥಹಳ್ಳಿ :ತುಂಗಾ ನದಿಯಲ್ಲಿ ನೀರುಪಾಲಾಗಿದ್ದ ಇಬ್ಬರು ಯುವಕರ ಮೃ** ಪತ್ತೆ!

ತೀರ್ಥಹಳ್ಳಿಯ ಬಾಳೆಬೈಲು ಪಾರ್ಕ್ ಸಮೀಪ ತುಂಗಾ ನದಿಯಲ್ಲಿ ನೀರುಪಾಲಾಗಿದ್ದ ದಾವಣಗೆರೆ ಮೂಲದ ಇಬ್ಬರು ಯುವಕರ ಮೃ**ದೇ**ಗಳು ಪತ್ತೆಯಾಗಿವೆ.ಶಿವು (22) ಹಾಗೂ ರುದ್ರೇಶ್ (24) ಮೃತ ಯುವಕರು. ಈಜಲು ನದಿಗೆ ತೆರಳಿದ್ದ ಐವರ ತಂಡದ ಇಬ್ಬರು ಯುವಕರು ನೀರುಪಾಲಾಗಿದ್ದರು. ಇದೀಗ ಇಬ್ಬರ ಮೃತದೇಹಗಳೂ ಪತ್ತೆಯಾಗಿವೆ.ಈವೇಳೆ ನಿರಂತರ ಹುಡುಕಾಟದಲ್ಲಿದ್ದ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಪೊಲೀಸ್,ಅಗ್ನಿಶಾಮಾಕ ಸಿಬ್ಬಂದಿಗಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. Read More ತೀರ್ಥಹಳ್ಳಿ :ತುಂಗಾ ನದಿಯಲ್ಲಿ ನೀರುಪಾಲಾಗಿದ್ದ ಇಬ್ಬರು ಯುವಕರ ಮೃ** ಪತ್ತೆ!

ತೀರ್ಥಹಳ್ಳಿ: ಜೆಜೆಎಂ ನಾಮಫಲಕ ಕಾಮಗಾರಿ ಕಳಪೆ ಆರೋಪ!

ತೀರ್ಥಹಳ್ಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಗುಣಮಟ್ಟದ ಕುರಿತು ಈಗಾಗಲೇ ಹಲವು ಪ್ರಶ್ನೆಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಯೋಜನೆಯ ನಾಮಫಲಕ ಕಾಮಗಾರಿಯ ಕಳಪೆ ಗುಣಮಟ್ಟದ ಕುರಿತು ಆರೋಪಗಳು ಕೇಳಿಬಂದಿವೆ.ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಬೇಕಾದ ಸಂದರ್ಭದಲ್ಲಿ, ನಾಮಫಲಕ ಕಾಮಗಾರಿಯಲ್ಲಿನ ಲೋಪಗಳ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಈ ವಿಚಾರದಲ್ಲಿ ಕಾಣದ ಕೈಗಳ ಪ್ರಭಾವವಿದೆಯೇ? ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ.oಈ ಸಂಬಂಧ ಮುಳುಬಾಗಿಲು ಗ್ರಾಂ ಪಂ ಮಾಜಿ ಸದಸ್ಯರು ಹಾಗೂ ಸಮಾಜ ಸೇವಕರಾದ ಡಾ. ಮಂಜುನಾಥ್ ಶೆಟ್ಟಿ ಅವರು ದಾಖಲೆ ಸಹಿತ ವಿಚಾರಗಳನ್ನು ಮುಂದಿಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಕಾಮಗಾರಿಯ ಗುಣಮಟ್ಟ, ವೆಚ್ಚ, ಅನುಷ್ಠಾನದ ವಿಧಾನ ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರ ಜವಾಬ್ದಾರಿಯ ಕುರಿತು ದಾಖಲೆಗಳ ಆಧಾರದಲ್ಲಿ ಮಾಹಿತಿ ಬಹಿರಂಗಪಡಿಸುವ ಸಾಧ್ಯತೆಯಿದೆ.

ಸರ್ಕಾರದ ಅನುದಾನದಲ್ಲಿ ನಡೆಯುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವುದು ಮತ್ತು ಸಾರ್ವಜನಿಕ ಹಣದ ಸದ್ಬಳಕೆ ಖಚಿತಪಡಿಸುವುದು ಸಂಬಂಧಪಟ್ಟ ಇಲಾಖೆಗಳ ಕರ್ತವ್ಯವಾಗಿದೆ. ನಾಮಫಲಕ ಕಾಮಗಾರಿಯಲ್ಲಿ ನಿಜವಾಗಿಯೂ ಲೋಪಗಳಿವೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸ್ಪಷ್ಟನೆ ನೀಡಬೇಕಿದೆ.

ಆಗುಂಬೆ ಗ್ರಾಮ ಠಾಣಾ ಜಾಗದ ಒತ್ತುವರಿ ತೆರವು ಕಾರ್ಯಾಚರಣೆ

ತೀರ್ಥಹಳ್ಳಿ: ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಠಾಣಾ ಜಾಗದ ಒತ್ತುವರಿ ತೆರವು ಕಾರ್ಯಾಚರಣೆಶುರುವಾಗಿದ್ದು

ಗ್ರಾಮ ಪಂಚಾಯಿತಿಯ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಸುಧೀಂದ್ರ ಮಲ್ಯ ಅವರಿಗೆ ಸಂಬಂಧಿಸಿದ ಒತ್ತುವರಿ ಎಂದು ಗುರುತಿಸಲಾದ ಜಾಗವನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಾಯಿತು.

ಕಾರ್ಯಾಚರಣೆಯಲ್ಲಿ ಮೆಸ್ಕಾಂ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯದೊಂದಿಗೆ ತೆರವು ಕಾರ್ಯಾಚರಣೆ ಶುರವಾಗಿದ್ದು ಇದೀಗ ಸುಂದಿಂದ್ರ ಮಲ್ಯರಿಗೆ ತೆರವುಗೊಳಿಸಲು ನವೆಂಬರ್ 7 ನೆ ತಾರೀಕಿನ ತನಕ ಗಡವು ನೀಡಿದ್ದು, ತವಾಗಿಯೇ ಖುಲ್ಲ ಮಾಡದಿದ್ದಲ್ಲಿ ಇಲಾಖೆ ವತಿಯಿಂದ ತೆರವು ಗೊಳಿಸಲು ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೇಗರವಳ್ಳಿಯಲ್ಲಿ ಅ.31ರಂದು ಹೋಬಳಿ ಮಟ್ಟದ ಪ್ರಜಾ ಸೇವಾ ಅಭಿಯಾನ

ತೀರ್ಥಹಳ್ಳಿ: ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ವತಿಯಿಂದ ಹೋಬಳಿ ಮಟ್ಟದ ಪ್ರಜಾ ಸೇವಾ ಅಭಿಯಾನವನ್ನು ಅಕ್ಟೋಬರ್ 31ರ ಶನಿವಾರ ಮೇಗರವಳ್ಳಿಯಲ್ಲಿ ಆಯೋಜಿಸಲಾಗಿದೆ.ಮೇಗರವಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಅಭಿಯಾನ ನಡೆಯಲಿದ್ದು, ಗ್ರಾಮ ಪಂಚಾಯಿತಿ ಮೇಗರವಳ್ಳಿ ವತಿಯಿಂದ ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿದೆ.

ಅಭಿಯಾನದಡಿ ಸಾರ್ವಜನಿಕರಿಗೆ ವಿವಿಧ ಸರ್ಕಾರಿ ಸೇವೆಗಳ ಮಾಹಿತಿ ನೀಡುವುದು, ಅರ್ಜಿಗಳನ್ನು ಸ್ವೀಕರಿಸಿ ಪರಿಹಾರ ಕಲ್ಪಿಸುವುದು, ಸರ್ಕಾರದ ವಿವಿಧ ಸೌಲಭ್ಯಗಳನ್ನು ವಿತರಿಸುವುದು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಸಲಹೆ ನೀಡುವ ಕಾರ್ಯಗಳು ನಡೆಯಲಿವೆ.“ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಎಂಬ ಆಶಯದೊಂದಿಗೆ ಆಯೋಜಿಸಿರುವ ಈ ಅಭಿಯಾನದ ಪ್ರಯೋಜನವನ್ನು ಹೋಬಳಿ ವ್ಯಾಪ್ತಿಯ ಸಾರ್ವಜನಿಕರು ಪಡೆದುಕೊಳ್ಳುವಂತೆ ಗ್ರಾಮ ಪಂಚಾಯಿತಿ ಮೇಗರವಳ್ಳಿ ತಿಳಿಸಿದೆ.

– ದಿನಾಂಕ: ಅಕ್ಟೋಬರ್ 31, ಶನಿವಾರ

ಸಮಯ: ಬೆಳಿಗ್ಗೆ 10 ಗಂಟೆ

ಸ್ಥಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನ, ಮೇಗರವಳ್ಳಿ