ರಾಷ್ಟ್ರಮಟ್ಟಕ್ಕೆ ವಾಗ್ದೇವಿಯ ಮತ್ತೊಂದು ಕ್ರೀಡಾ ಪ್ರತಿಭೆ ದೀಕ್ಷಾ ಎನ್.!

ತೀರ್ಥಹಳ್ಳಿ : ಬೆಂಗಳೂರಿನ ಸರ್ಜಾಪುರದಲ್ಲಿ ನವೆಂಬರ್ 1 ಮತ್ತು 2ರಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ವತಿಯಿಂದ ಆಯೋಜಿಸಲಾಗಿದ್ದ 19 ವರ್ಷದೊಳಗಿನ ಬಾಲಕ-ಬಾಲಕಿಯರ ರಾಜ್ಯಮಟ್ಟದ ಖೋ-ಖೋ ಕ್ರೀಡಾಕೂಟದಲ್ಲಿ ಅಮೋಘ ಪ್ರದರ್ಶನ ನೀಡಿದ ವಾಗ್ದೇವಿ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ದೀಕ್ಷಾ ಎನ್. ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.ಸೊರಬದ ಶ್ರೀಮತಿ ಜಯಮ್ಮ ಹಾಗೂ ಶ್ರೀ ನರೇಂದ್ರ ನಾಯಕ್ ದಂಪತಿಯ ಪುತ್ರಿಯಾದ ದೀಕ್ಷಾ ಶೈಕ್ಷಣಿಕವಾಗಿಯೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಾಳೆ.ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸುವ ಕ್ರೀಡಾಕೂಟಗಳಲ್ಲಿ ಮಾತ್ರವಲ್ಲದೆ, ದಸರಾ ಕ್ರೀಡಾಕೂಟ ಹಾಗೂ ವಿವಿಧ ಮುಕ್ತ ಪಂದ್ಯಾವಳಿಗಳಲ್ಲಿಯೂ ಭಾಗವಹಿಸಿ ಹಲವಾರು ವೈಯಕ್ತಿಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ಈ ಮೂಲಕ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕು ಹಾಗೂ ತಾನು ವ್ಯಾಸಂಗ ಮಾಡುತ್ತಿರುವ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.ವಿದ್ಯಾರ್ಥಿನಿಯ ಈ ಸಾಧನೆಗೆ ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕ ವೃಂದ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದು, ಮುಂಬರುವ ರಾಷ್ಟ್ರಮಟ್ಟದ ಖೋ-ಖೋ ಸ್ಪರ್ಧೆಯಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆಲ್ಲುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಹಬ್ಬದ ದಿನವೂ ರಜೆ ಇಲ್ಲವೇ?

ತೀರ್ಥಹಳ್ಳಿ : ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಹಬ್ಬದ ದಿನಗಳಲ್ಲಿಯೂ ರಜೆ ನೀಡದೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿರುವ ಸರ್ಕಾರದ ಕ್ರಮಕ್ಕೆ ಮಂಜುನಾಥ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಅಂಗನವಾಡಿಗಳನ್ನು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮುಚ್ಚುವಂತಿಲ್ಲ. ಈ ಅವಧಿಯಲ್ಲಿ ಪೋಷಣ್ ಟ್ರ್ಯಾಕರ್‌ನಲ್ಲಿ ಅಗತ್ಯ ಮಾಹಿತಿಗಳನ್ನು ಅಪ್‌ಡೇಟ್ ಮಾಡಬೇಕು. ಕಾರ್ಯಕರ್ತೆ ಹಾಗೂ ಸಹಾಯಕಿಯರು ಮೇಲ್ವಿಚಾರಕರ ಗಮನಕ್ಕೆ ತಂದು, ಒಬ್ಬರು ರಜೆ ಪಡೆದು ಮತ್ತೊಬ್ಬರು ಕರ್ತವ್ಯ ನಿರ್ವಹಿಸುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಂಗನವಾಡಿಗಳನ್ನು ಮುಚ್ಚಲು ಅವಕಾಶವಿಲ್ಲ ಎಂದು ಸೂಚಿಸಲಾಗಿದೆ. ಮೇಲ್ವಿಚಾರಕಿಯರು ಹಾಗೂ ಸಿ ಡಿ ಪಿ ಓ ಖುದ್ದಾಗಿ ಅಂಗನವಾಡಿಗಳಿಗೆ ಭೇಟಿ ನೀಡಲಿದ್ದೇವೆ ಎಂಬ ಸೂಚನೆ ನೀಡಲಾಗಿದೆ.ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೂ ಕುಟುಂಬವಿದೆ. ಅವರಿಗೂ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸುವ ಆಸೆ ಇರುತ್ತದೆ. ಹೀಗಿರುವಾಗ ಹಬ್ಬದ ದಿನಗಳಲ್ಲಿಯೂ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರುವುದು ಸರಿಯಲ್ಲ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಹಬ್ಬದ ದಿನ ರಜೆ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಮಂಜುನಾಥ್ ಶೆಟ್ಟಿ ಮನವಿ ಮಾಡಿದ್ದಾರೆ.